ಸಂಗೀತ ವಿದ್ವಾನ್ ಬಿ. ಎಂ. ಸುಂದರರಾವ್(ಜುಲೈ ೬, ೧೯೩೮) ಅವರು ಕರ್ನಾಟಕ ಸಂಗೀತ ಲೋಕದಲ್ಲಿ ಅದರಲ್ಲೂ ವೇಣುವಾದನದಲ್ಲಿ ಪ್ರಖ್ಯಾತ ಹೆಸರು. ಸಂಗೀತ ಲೋಕದ ಮೇರು ಟಿ. ಆರ್. ಮಹಾಲಿಂಗಂ ಅವರ ಶಿಷ್ಯರಾದ ಸುಂದರರಾವ್ ಅವರು ಸಂಗೀತದ ಆಸಕ್ತಿಹೊಂದಿದವರಾಗಿ ಉಚಿತ ಶಿಕ್ಷಣ ನೀಡುತ್ತಾರೆ. ಕೊಳಲು ತಯಾರಿಕೆಯಲ್ಲೂ ಅವರು ಪ್ರಸಿದ್ಧಿ ಪಡೆದಿದ್ದಾರೆ. == ಜೀವನ == ಆರ್ಥಿಕವಾಗಿ ಬಹಳ ಕಷ್ಟದಲ್ಲಿದ್ದರೂ ಸಾಂಸ್ಕೃತಿಕ ಶ್ರೀಮಂತಿಕೆಯಲ್ಲಿ ಎತ್ತರದಲ್ಲಿದ್ದ ಕುಟುಂಬದಲ್ಲಿ ಜುಲೈ 6, 1938ರಂದು ಕೋಲಾರದಲ್ಲಿ ಸುಂದರರಾವ್‌ ಜನಿಸಿದರು. ಇವರ ತಾತ ಖಂಡೋಜಿರಾವ್‌, ತಂದೆ ಮುರಹರಿರಾವ್‌, ದೊಡ್ಡಪ್ಪ ಸಂತೋಜಿರಾವ್‌, ಚಿಕ್ಕಪ್ಪ ವೆಂಕೋಬರಾವ್‌ ಎಲ್ಲರೂ ಸಂಗೀತ ವಿದ್ವಾಂಸರೇ. ತಾಯಿ ಸುಗಂಧಾಬಾಯಿ ಅವರು. ದೊಡ್ಡಪ್ಪ, ಚಿಕ್ಕಪ್ಪಂದಿರ ಮಾರ್ಗದರ್ಶನದಲ್ಲಿ ಗಾಯನವನ್ನು ಅಭ್ಯಸಿಸಿ ಮುಂದೆ ಅಂಬಳೆ ರಾಮಸ್ವಾಮಿ, ಎ. ಕೆ. ಸುಬ್ಬರಾವ್‌ ಹಾಗೂ ಎಸ್‌.ಪಿ. ನಟರಾಜನ್‌ ಅವರುಗಳಲ್ಲಿ ವೇಣು ವಾದನದಲ್ಲಿ ಸುಶಿಕ್ಷಿತರಾದರು. == ಟಿ. ಆರ್. ಮಹಾಲಿಂಗಂ ಶಿಷ್ಯರು == ಟಿ.ಆರ್. ಮಹಾಲಿಂಗಂ ಅವರಲ್ಲಿ ಗುರುಕುಲ ಪದ್ಧತಿಯಲ್ಲಿ ಪ್ರೌಢ ಶಿಕ್ಷಣ ಪಡೆದು ಗುರುಗಳ ಪೂರ್ಣಾನುಗ್ರಹವನ್ನು ಗಳಿಸಿ ಅವರೊಡನೆ ಫ್ರಾನ್ಸ್ ಗೆ ಹೋಗಿ ಅಲ್ಲಿ ಕಾರ್ಯಕ್ರಮಗಳನ್ನು ನೀಡಿ ಅಲ್ಲಿನ ಆಸಕ್ತರಿಗೆ ವೇಣುವಾದನ ಶಿಕ್ಷಣವನ್ನು ನೀಡಿದ್ದಾರೆ. == ಉಚಿತ ಸಂಗೀತ ಶಾಲೆ == ಸುಂದರರಾವ್ ಅವರು ಮಹಾಲಿಂಗಂ ಅವರ ನಿಧನಾನಂತರ ೧೯೮೬ರಲ್ಲಿ ಗುರುಗಳ ಸ್ಮರಣಾರ್ಥ ಸಂಗೀತ ಶಾಲೆಯನ್ನು ಪ್ರಾರಂಭಿಸಿ ಅಲ್ಲಿ ಅನೇಕ ವಿದ್ಯಾರ್ಥಿಗಳಿಗೆ ವೇಣು ವಾದನದಲ್ಲಿ ಉಚಿತವಾಗಿ ಶಿಕ್ಷಣ ನೀಡುತ್ತಿದ್ದಾರೆ. ಇದಲ್ಲದೆ ಅವರು ಕನ್ನಿಕಪರಮೇಶ್ವರಿ ಪಾಠಶಾಲೆ, ಶಿವಾ ಮ್ಯೂಸಿಕ್‌ ಇನ್‌ಸ್ಟಿಟ್ಯೂಟ್‌. ಸತ್ಯಮ್‌ ಮ್ಯೂಸಿಕ್‌ ಅಕಾಡಮಿ ಮುಂತಾದೆಡೆ ಕೂಡಾ ಸೇವೆ ಸಲ್ಲಿಸಿದ್ದಾರೆ. ಬಹಳಷ್ಟು ಜನರಿಗೆ ಉಚಿತವಾಗಿ ಸಹಾ ಸಂಗೀತ ಶಿಕ್ಷಣವನ್ನು ಧಾರೆ ಎರೆದಿದ್ದಾರೆ. == ಕೊಳಲು ತಯಾರಿಕೆ == ಕೊಳಲನ್ನು ತಯಾರಿಸುವುದರಲ್ಲಿಯೂ ನಿಷ್ಣಾತರಾಗಿರುವ ಸುಂದರರಾವ್‌ ಸಾಂಪ್ರದಾಯಿಕ ರೀತಿಯ ಹಾಗೂ ವಿನೂತನವಾದ ಕೊಳಲುಗಳನ್ನು ಸ್ವತಃ ತಯಾರಿಸಿ ಆರ್ಥಿಕವಾಗಿ ಹಿಂದುಳಿದಿರುವವರಿಗೆ ಉಚಿತವಾಗಿಯೂ ಕೊಡುತ್ತಿದ್ದಾರೆ. == ಸಂಗೀತ ಕಚೇರಿಗಳು == ಕೆ.ಜಿ.ಎಫ್‌. ನ ರಾಮನವಮಿ ಸಂಗೀತೋತ್ಸವ, ಮಲ್ಲೇಶ್ವರದ ತ್ಯಾಗರಾಜ ಸಂಗೀತೋತ್ಸವ, ಕನಕಪುರ, ಬೆಂಗಳೂರಿನ ನಾದಬ್ರಹ್ಮ ಸಭಾ, ಸಂಗೀತ ಪ್ರಚಾರ ಮಂಡಲಿ, ಚಾಮರಾಜಪೇಟೆ ರಾಮಸೇವಾಮಂಡಲಿ, ತಿರುಪತಿಯ ರಾಮನವಮಿ ಉತ್ಸವ, ಕರ್ನಾಟಕ ಗಾನ ಕಲಾ ಪರಿಷತ್‌ ಹೀಗೆ ಎಲ್ಲೆಡೆ ಸುಂದರರಾವ್ ಅವರ ಸಂಗೀತ ಕಛೇರಿಗಳು ಜರುಗಿವೆ. ಫ್ರಾನ್ಸ್‌, ಹಾಲೆಂಡ್‌, ಲಂಡನ್‌, ಇಟಲಿ, ಸ್ವಿಜರ್‌ಲ್ಯಾಂಡ್‌ಗಳಲ್ಲಿ ಕೊಳಲುವಾದನದ ಪ್ರಾತ್ಯಕ್ಷಿಕೆ ಮತ್ತು ಕಚೇರಿಗಳು, ಪ್ರಸಿದ್ಧ ತಬಲವಾದಕ ಜಾಕೀರ್ ಹುಸೇನ್‌ ಮತ್ತು ಕೊಳಲುವಾದಕರಾದ ಹರಿಪ್ರಸಾದ್‌ ಚೌರಾಸಿಯಾರವರೊಡನೆ ನಡೆಸಿಕೊಟ್ಟ ಜುಗಲಬಂದಿ ಕಾರ್ಯಕ್ರಮಗಳು ಇವರಿಗೆ ವಿಶ್ವದೆಲ್ಲೆಡೆಯಲ್ಲಿ ಕೀರ್ತಿ ತಂದಿವೆ. == ಪ್ರಶಸ್ತಿ ಗೌರವಗಳು == ಇವರ ಪತ್ನಿ ಗಾಯಕಿ, ಪುತ್ರ ಮೃದಂಗ ವಾದಕ. ಇವರೊಡನೆ ಕಛೇರಿಗಳನ್ನು ನೀಡುತ್ತ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುತ್ತ ತಮ್ಮ ಜೀವನ ಹಾಗೂ ಸಮಯವನ್ನು ಸಾರ್ಥಕಗೊಳಿಸಿಕೊಳ್ಳುತ್ತಿರುವ ಶ್ರೀಯುತರಿಗೆ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಇತ್ತು ಸನ್ಮಾನಿಸಿದೆ. ಇದಲ್ಲದೆ ಹಲವಾರು ಸಂಘಸಂಸ್ಥೆಗಳಿಂದ ಸನ್ಮಾನ ಸಂದಿವೆ.. ಕರ್ನಾಟಕ ಕಲಾಶ್ರೀ, ನಾದಕೋಕಿಲ, ನಾದಬ್ರಹ್ಮ, ಕೊಳಲು ಗಾನ ಕಲಾ ಭೂಷಣ, ವಿಶ್ವಭಾರತಿ ಕಲಾ ಜ್ಯೋತಿ ಮುಂತಾದ ಪ್ರಶಸ್ತಿ ಗೌರವಗಳು ಅವರಿಗೆ ಸಂದಿವೆ. ಪ್ಯಾಲೇಸ್‌ ಗುಟ್ಟಹಳ್ಳಿಯಲ್ಲಿ ಬೆಂಗಳೂರಿನ ಮಹಾನಗರಪಾಲಿಕೆ ನಿರ್ಮಿಸಿರುವ ರಂಗಮಂದಿರಕ್ಕೆ “ಬಿ.ಎಂ. ಸುಂದರರಾವ್‌ ಬಯಲು ರಂಗಮಂದಿರ”ವೆಂದು ನಾಮಕರಣ ಮಾಡಲಾಗಿದೆ. == ಮಾಹಿತಿ ಕೃಪೆ == ಕಣಜ, ://../%3Fkeyword%3Dbm-- ://../?=R8D9RzlbMPk